top of page
ದರ್ಶನ ಸೇವೆ
ಧರ್ಮದರ್ಶಿಗಳಾದ ಶ್ರೀ ಸುಭಾಷ್ ರಾಮ ಮಹಾಲೆ ಅವರು ಶ್ರೀದೇವಿಗೆ ಸಲ್ಲಿಸುತ್ತಿದ್ದ ಪೂಜೆಯ ರೀತಿಯು ತುಂಬಾ ವಿಭಿನ್ನವಾಗಿ ಕಂಡು ಬರುತ್ತಿತ್ತು. ಆರಂಭದಿಂದಲೂ ದೈವ ಶಕ್ತಿಯನ್ನು ಆರಾಧಿಸಿಕೊಂಡು ಸುಭಾಷ್ ಅವರು ತಮ್ಮ ನಿಷ್ಕಲ್ಮಷ ಭಕ್ತಿಯಿಂದ ಶ್ರೀ ದೇವರನ್ನು ಒಲಿಸಿಕೊಂಡು ಶ್ರೀ ಸಿದ್ಧಪುರುಷ ದೇವರ ಆವಾಹಣೆಯೊಂದಿಗೆ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ದರುಶನ ಮುಖೇನ ಪ್ರಸಾದ ವಿತರಣೆ, ಹಲವಾರು ಭಕ್ತರ ಸಮಸ್ಯೆಗಳಿಗೆ ಶ್ರೀ ದೇವರ ಸನ್ನಿಧಿಯಲ್ಲಿ ಪರಿಹಾರ ದೊರಕಿಸಿಕೊಡುತ್ತಿದ್ದರು. ತಾವುಗಳು ಎದುರಿಸುತ್ತಿದ್ದ ಎಂತಹ ಸಮಸ್ಯೆಗಳಿಗೂ ಶ್ರೀದೇವಿಯ ಪ್ರಸಾದವನ್ನು ಪಡೆದು ಇತ್ಯರ್ಥಪಡಿಸಿಕೊಳ್ಳುತ್ತಿದ್ದರು. ಅತ್ಯಂತ ಸರಳ ವ್ಯಕ್ತಿತ್ವದ ಮೂಲಕವೇ ಇಡೀ ಚೌಡೇಶ್ವರಿ ದೇವಾಲಯವನ್ನು ಅಭಿವೃದ್ಧಿ ಪಡಿಸಿದ್ದರು.
ಧಾರ್ಮಿಕವಾದ ನಡೆ-ನುಡಿಗಳ ಸುಭಾಷ್ ಮಹಾಲೆ ಅವರಂತೆಯೇ ತನ್ನ ಅಮೂಲ್ಯವಾದ ಮೂರು ಮಕ್ಕಳ ಪೈಕಿ ಹಿರಿಯ ಮಗ ವಿನೋದ್ ಮಹಾಲೆಯವರು ತಂದೆಯವರು ಕಾಲವಾದ ನಂತರ ದೇವಾಲಯದ ಧರ್ಮದರ್ಶಿಗಳಾಗಿ ಜವಾಬ್ದಾರಿಯನ್ನು ವಹಿಸಿಕೊಂಡರು. ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ತನ್ನ ಶ್ರದ್ಧಾ ಭಕ್ತಿ ಹಾಗೂ ಪ್ರಾಮಾಣಿಕವಾದ ನಿರಂತರ ಸೇವೆಯಿಂದ ಇಲ್ಲಿ ಸದಾ ಜಾಗೃತವಾಗಿರುವ ಅತ್ಯಂತ ಶಕ್ತಿಯುತ ಶ್ರೀಸಿದ್ಧ ಪುರುಷ ಮತ್ತು ಶ್ರೀ ಚೌಡೇಶ್ವರಿ ದೇವಿಯನ್ನು ಒಲಿಸಿಕೊಂಡರು. ಕ್ರಮೇಣವಾಗಿ ಶ್ರೀ ದೇವರಲಿದ್ದ ತಮ್ಮ ದೃಢ ಭಕ್ತಿಯಿಂದ ಶ್ರೀಸಿದ್ಧ ಪುರುಷ, ಶ್ರೀಚೌಡೇಶ್ವರಿ ಹಾಗೂ ಶ್ರೀನಾಗದೇವರ ಆವಾಹಣೆಯನ್ನು ಹೊತ್ತು, ಕಷ್ಟ ಕಾರ್ಪಣ್ಯಗಳೆಂದು ಆಗಮಿಸುವ ಭಕ್ತರ ಸಮಸ್ಯೆಗಳಿಗೆ ದರುಶನ ಮುಖೇನ ಪರಿಹಾರ ಹಾಗೂ ಭಕ್ತರ ಕೋರಿಕೆಯನ್ನು ಈಡೇರಿಸುವಲ್ಲಿ ನಿರತರಾದರು. ಕಂಕಣ ಭಾಗ್ಯ, ಸಂತಾನ ಭಾಗ್ಯ ಕರುಣಿಸುವ ಹಾಗೂ ತಾವು ಎದುರಿಸುತ್ತಿರುವ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ, ದುಷ್ಟ ಶಕ್ತಿಗಳಿಂದ ಮುಕ್ತಿ ದೊರಕುತ್ತಿರುವ ಸಾಕಷ್ಟು ಪವಾಡಗಳು ಕಂಡು ಬರುತ್ತಿರುವುದು ಕ್ಷೇತ್ರದ ಮಹಿಮೆಯಾಗಿದೆ ಜೊತೆಯಲ್ಲಿ ದರುಶನ ಮುಖೇನ ಪಡೆದ ಮಾರ್ಗದರ್ಶನದಂತೆ ಶ್ರೀ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ನಾವು ನೋಡಬಹುದಾಗಿದೆ.
ಪ್ರತಿ ಶುಕ್ರವಾರ, ಅಮವಾಸ್ಯೆ ಹಾಗೂ ವಿಶೇಷ ದಿನಗಳಂದು ಶ್ರೀ ಕ್ಷೇತ್ರದಲ್ಲಿ ದರುಶನ ಸೇವೆ ನೇರವೇರಲಿದ್ದು, ದೂರದೂರುಗಳಿಂದ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ದರುಶನ ಮುಖೇನ ಪ್ರಸಾದ ವಿತರಣೆಯೊಂದಿಗೆ ತಮ್ಮ ಸಮಸ್ಯೆಗಳು ಹಾಗೂ ಅನೇಕ ವಿಚಾರಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ದೊರೆಯುತ್ತಿರುವುದನ್ನು ಕಾಣಬಹುದಾಗಿದೆ.
bottom of page