top of page
page 1_edited.jpg

        ಸೃಷ್ಟಿಯಲ್ಲಿ ಎಲ್ಲಾ ಜೀವಿಗಳಿಗಿಂತ ಮನುಷ್ಯ ಜನ್ಮವನ್ನು ಶ್ರೇಷ್ಠವೆಂದೂ, ಉತ್ತಮವೆಂದೂ ಎಲ್ಲಾ ದಾರ್ಶನಿಕರು ಸಾರಿ ಹೊಗಳಿದ್ದಾರಾದರೂ ಸಾರ್ಥಕ, ಪವಿತ್ರ, ಸಾಧನಾಶೀಲ ಕ್ಷಣಗಳಾಗಿಸಿ ಮಹತ್ ಸಾಧನೆಯನ್ನು ಮಾಡಿ ಲೋಕದ ಪಾಲಿಗೆ ಗಣ್ಯ, ಆದರಣೀಯ ಅಭಿಮಾನಧನವಾಗಿ ಬಾಳುವ ಮನುಷ್ಯರ ಸಂಖ್ಯೆ ತೀರಾ ವಿರಳ.


      ಪಡುವಣ ಕಡಲ ತೀರದ ತೆಂಗು ಕಂಗಿನಿಂದ ಅಲಂಕೃತಗೊಂಡ ಹೊನ್ನಾವರ ತಾಲ್ಲೂಕಿನ ಮಂಕಿ ಎಂಬ ಊರಿನಲ್ಲಿ ದಿನಾಂಕ 03-07-1950 ರಂದು ಬಡ ಕುಟುಂಬದಲ್ಲಿ ಇವರ ಜನನವಾಯಿತು. ಭರತವರ್ಷದ ಸ್ವಾತಂತ್ರ್ಯೋದಯವಾಗಿ ಕೇವಲ ಎರಡು ವರ್ಷ ಸಂದಿತ್ತು. ಅಂತೆಯೇ ಜನಿಸಿದ ಮಗುವಿಗೆ ಜನ್ಮದಾತರಾದ ಶ್ರೀ ರಾಮ ಮಹಾಲೆ ಹಾಗೂ ಶ್ರೀಮತಿ ಪದ್ಮಾವತಿ ರಾಮ ಮಹಾಲೆ ತಮ್ಮ ಅಷ್ಟಮ ಗರ್ಭದ ಈ ಕಂದನಿಗೆ ಸುಭಾಷ್ ಎಂಬ ಹೆಸರನ್ನಿಟ್ಟು ತಮ್ಮ ಬಡತನದ ನಡುವೆಯೂ ಈ ಕಂದನೊಬ್ಬ ಮಹತ್ಸಾಧಕನಾಗಲೆಂದು ಹಾರೈಸಿ, ಕುಲದೇವಿ ಶ್ರೀ ಮಹಾಲಸಾ ನಾರಾಯಣಿಯನ್ನು ಮನಸಾರೆ ಪ್ರಾರ್ಥಿಸಿರಬೇಕು.
 

     ಸುಭಾಷ್‍ರಿಗೆ ತಾವು ಜನಿಸಿದ ಕುಟುಂಬದಲ್ಲಿ ಕಾಡುತ್ತಿದ ಬಡತನದ ಅರಿವು ಮೂಡಿದ್ದರಿಂದಲೇನೋ ವಿದ್ಯಾಭ್ಯಾಸ ರುಚಿಸದೆ ಕೇವಲ ಮೂರನೆ ತರಗತಿಯವರೆಗೆ ಓದಿ ನಂತರ ಅಪ್ಪ ಅಮ್ಮರಿಗೆ ಸಹಾಯ ಮಾಡುವ ದುಡಿಮೆಯತ್ತ ಸಾಗಿರುವಾಗಲೇ ತಂದೆ ಶ್ರೀ ರಾಮ್ ಮಹಾಲೆಯವರ ಅಕಾಲಿಕ ಮರಣವಾಗಿತ್ತು.

 

     ಕಡು ಬಡತನದಲ್ಲಿ ಹತ್ತು ಮಕ್ಕಳನ್ನು ರತ್ನಗಳಂತೆ ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಹೊತ್ತು ಮಾತೃದೇವತೆ ಶ್ರೀಮತಿ ಪದ್ಮಾವತಿ ಮಹಾಲೆಯವರು ಮಂಕಿಯಿಂದ ಹೊರಟು ಕರಿಗಲ್ಲು ಕ್ವಾರಿಗಳಿಂದ ಕೂಡಿದ ಶರಾವತಿ ತೀರದ ಕಾರ್ಗಲ್‍ಗೆ ತಮ್ಮ ಪಯಣ ಬೆಳೆಸಿದರು. ತಾಯಿಯ ಜೊತೆಯಲ್ಲಿ ಕಾರ್ಗಲ್ಲಿನಿಂದ ಜೋಗ, ಆನೆಬೈಲು(ಎ.ಬಿ.ಸೈಟ್) ಕೆಲಸದ ಪ್ರದೆಶಗಳಿಗೆ ಹಾಲು, ಹಣ್ಣು, ಕಡಲೆಕಾಯಿಗಳನ್ನು ಬಾಲಕ ಸುಭಾಷರವರು ಹೊತ್ತೊಯ್ದು ವ್ಯಾಪಾರ ಮಾಡುತ್ತ, ಸ್ವಲ್ಪ ಸಮಯದಲ್ಲಿ ಸ್ವಂತ ಉದ್ಯೋಗ ಮಾಡಬೇಕೆಂದು ಮನಸ್ಸು ಮಾಡಿದರು. ಸ್ವಂತ ಉದ್ಯೋಗ ಮಾಡಲು ಹೊರಟಾಗ ಅವರ ಕೈಯಲಿದ್ದುದು ಕೇವಲ ಹತ್ತು ಬೆರಳುಗಳು ಆದರೆ ತಲೆಯಲ್ಲಿ ಹತ್ತಾರು ಮಹತ್ವಾಕಾಂಕ್ಷೆಯ ಮಾರ್ಗಗಳು. ಆತ್ಮೀಯ ಸ್ನೇಹಿತರ ಸಹಕಾರದಿಂದ 1972ರಲ್ಲಿ ಕಾರ್ಗಲ್ ಬಜಾರಿನಲ್ಲಿ ಸ್ವಂತ ಕಿರಾಣಿ ಅಂಗಡಿಯನ್ನು ಪ್ರಾರಂಭಿಸಿ, ಎಲ್ಲಾ ರೀತಿಯ ಜನರ ವಿಶ್ವಾಸ ಗಳಿಸಿ ಸಹೋದರರೊಡಗೂಡಿ "ಸುಭಾಷ್ ಎಂಡ್ ಕೋ" ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಈ ಸಂಸ್ಥೆ ಜನಸಾಮಾನ್ಯರ ಮನಸ್ಸಿನಲ್ಲಿ ನಮ್ಮ ಸುಭಾಷ್ ಅಂಗಡಿಯೆಂಬ ಭಾವನೆಯನ್ನು ಹುಟ್ಟು ಹಾಕಿತು.

      ಈ ಸಮಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅವರ್ಸಾ ಗ್ರಾಮದ ಕೇಶವ ಮುಕುಂದ ಹೆಗಡೆಯವರ ಪುತ್ರಿ ಜಯಂತಿಯೆಂಬುವರೊಡನೆ ಇವರ ವಿವಾಹವಾಯಿತು. ಪತ್ನಿಯವರು ಸಹ ಸರಳತೆ ಸಜ್ಜನಿಕೆಯಿಂದ ಜನರನ್ನು ಆದರಿಸಿ ಪತಿಯ ಸತ್ಕಾರ್ಯಗಳಿಗೆ ಪ್ರೋತ್ಸಾಹಕರಾಗಿ ನಿಂತರು.

   

     ಕಿರಾಣಿ ವ್ಯಾಪಾರವನ್ನು ಅಭಿವೃದ್ಧಿಗೊಳಿಸುತ್ತಾ ದೇವತಾ ಕಾರ್ಯ, ಗುರುಗಳ ಸೇವೆ, ಸಾಮಾಜಿಕ ಸೇವೆ, ವಿದ್ಯಾರ್ಥಿಗಳಿಗೆ ಹಾಗೂ ಮಂಗಳ ಕಾರ್ಯಗಳಿಗೆ ಧನಸಹಾಯ ನೀಡುವಿಕೆ, ಇವೆಲ್ಲವುಗಳಿಂದ ಸುತ್ತಮುತ್ತಲಿನ ತಾಲ್ಲೂಕಿನಲ್ಲಿ, ಜಿಲ್ಲೆಗಳಲ್ಲಿ ಸುಭಾಷರವರು ಕೊಡುಗೈ ದಾನಿಗಳು ಎಂಬ ಕೀರ್ತಿ ಪಸರಿಸಿತ್ತು.

     ಶ್ರೀ ಗುರುವರ್ಯರು ತೋರಿದ ಜಾಗದಲ್ಲಿ 1982ರಲ್ಲಿ ಶ್ರೀ ರಾಘವೇಂದ್ರ ರೈಸ್ ಇಂಡಸ್ಟ್ರೀಸ್ ಎಂಬ ಅಕ್ಕಿ ಗಿರಣಿಯನ್ನು ಪ್ರಾರಂಭಿಸಿದರು. ಗುರುಗಳನ್ನು ತಮ್ಮ ಉದ್ಯಮಕ್ಕೆ ಗೌರವಪೂರ್ವಕವಾಗಿ ಆಮಂತ್ರಿಸಿ ಅವರ ಪಾದಪೂಜೆಗೈದು ರೈಸ್ ಮಿಲ್ ಎದುರು ಇರುವ ಶ್ರೀ ಚೌಡೇಶ್ವರಿ ದೇವಿಯ ಗುಡಿಯನ್ನು ತೋರಿಸಲಾಯಿತು. ಆಗ ಶ್ರೀ ಗುರುಗಳು ಆ ಸ್ಥಳವನ್ನು ನೋಡಿ "ಇದು ಅದ್ಭುತವಾದ ಶಕ್ತಿಯಿರುವ ಸ್ಥಳ, ಮುಂದೆ ಒಂದು ದಿನ ಇದು ಪುಣ್ಯಕ್ಷೇತ್ರವಾಗುವ ಲಕ್ಷಣಗಳಿಂದ ಕೂಡಿರುವ ಸ್ಥಳ ಎಂದು ವಿವರಸಿ ಅದನ್ನು ಅಭಿವೃದ್ಧಿಪಡಿಸಲು ಮಾರ್ಗದರ್ಶನ ನೀಡಿ ಅನುಗ್ರಹಿಸಿದರು. ಇದಾದ ಸ್ವಲ್ಪ ದಿನಗಳಲ್ಲಿ ಗೋವಾದ ಶ್ರೀ ಮಹಾಲಸಾ ಸಂಸ್ಥಾನದಲ್ಲಿಯ ಶ್ರೀ ದೇವರ ಗ್ರಾಮಪುರುಷ ಅವೇಶದಲ್ಲಿ ವಿಚಾರಿಸಿದಾಗ ಕೂಡ ಶ್ರೀ ಚೌಡೇಶ್ವರಿ ಗುಡಿ ಇರುವ ಸ್ಥಳ ಅತ್ಯಂತ ಶಕ್ತಿಯುತವಾದದ್ದು, ಒಬ್ಬ ಋಷಿಯು ಎಲ್ಲಾ ಶಕ್ತಿಗಳನ್ನು ಸಿಧ್ದಿಪಡಿಸಿಕೊಂಡು ಹುತ್ತದ ರೂಪದಲ್ಲಿ ಸಿದ್ಧಪುರುಷನ ನಾಮದಲ್ಲಿ ಸದಾ ಜಾಗೃತನಾಗಿದ್ದಾನೆ. ಅದನ್ನು ಅಭಿವೃದ್ಧಿಪಡಿಸಿದರೆ ನಿಮ್ಮ ಅಭಿವೃದ್ಧಿ ಹತ್ತು ಪಟ್ಟು ಹೆಚ್ಚುತ್ತದೆ ಎಂದು ನಿರೂಪಣೆಯಾಯಿತು. ಸ್ಥಳಿಯವಾಗಿ ಕಟ್ಟಿರುವ ಸುಂದರ ಭವ್ಯ ದೇವಾಲಯಗಳ ಪ್ರೇರಣೆಯು ಇವರಿಗೆ ಶ್ರೀ ಚೌಡೇಶ್ವರಿ ದೇವಾಲಯದ ನಿರ್ಮಾಣಕ್ಕೆ ಸ್ಫೂರ್ತಿಯನ್ನು ಚೈತನ್ಯವನ್ನೂ ನೀಡಿತು. ಶ್ರೀ ಗುರುಗಳ ಆದೇಶದಂತೆ ಮೊದಲಿಗೆ ಸಣ್ಣ ಗುಡಿಯ ನಿರ್ಮಾಣ ನಂತರ 25-12-1989ರಂದು ನೂತನ ದೇವಾಲಯದ ಗುದ್ದಲಿ ಪೂಜೆ ಶ್ರೀ ಗುರುವರ್ಯರ ಮಾರ್ಗದರ್ಶನದಲ್ಲಿ ನೆರವೇರಿತು.

      ದೇವಾಲಯದ ಕಾಮಗಾರಿ ನಡೆಯುವಲ್ಲಿ ಅಪರಿಚಿತರು ಬಂದು ಈ ಭವ್ಯ ಕಟ್ಟಡದ ನಿಮಾತೃ ಯಾರೆಂದು ಅಲ್ಲೇ ಇರುತ್ತಿದ್ದ ಇವರನ್ನು ಪ್ರಶ್ನಿಸಿದರೆ ಅವರು ರೈಸ್ ಮಿಲ್‍ನಲ್ಲಿ ಇದ್ದಾರೆಂದೂ, ಅಲ್ಲಿ ಯಾರಾದರೂ ಕೇಳಿದರೆ ದೇವಸ್ಥಾನದ ಬಳಿ ಇದ್ದಾರೆಂದೂ ಉತ್ತರಿಸುತ್ತಿದ್ದರೇ ವಿನಹ ಎಂದೂ ತಾನೇ ನಿರ್ಮಾತೃ ಎಂದು ಅಹಂ ಪ್ರದರ್ಶಿಸಲಿಲ್ಲವೆಂಬುದು ಅವರ ನಿರ್ಮಲ ಮನಸ್ಸು ಹಾಗೂ ನಿರಹಂಕಾರಕ್ಕೊಂದು ಉದಾಹರಣೆಯಾಗಿದೆ.
 

     ದೇವಾಲಯದ ನಿರ್ಮಾಣ ಕಾರ್ಯದೊಂದಿಗೆ ದಿನಾಂಕ 23-04-2994ರಂದು ಶ್ರೀ ಚೌಡೇಶ್ವರಿ ಕಲ್ಯಾಣ ಮಂದಿರ ಹಾಗೂ 21-05-1995 ರಂದು ಶ್ರೀ ಗುರುವರ್ಯರ ವಾಸ್ತವ್ಯಕ್ಕೆ ಬೇಕಾಗುವ ಸೌಲಭ್ಯಗಳನ್ನು ಹೊಂದಿರುವ ಶ್ರೀ ವಿದ್ಯಾಧಿರಾಜ ಸಭಾಗೃಹದ ಉದ್ಘಾಟನೆಯನ್ನು ಶ್ರೀ ಗುರುವಯರ ಅಮೃತ ಹಸ್ತದಿಂದ ಭವ್ಯವಾಗಿ ನೆರವೇರಿಸಲಾಯಿತು.


     ದೇವಾಲಯಕ್ಕೆ ಬರುವ ಭಕ್ತರಿಗೆ ದರ್ಶನದ ಮುಖಾಂತರ ಪ್ರಸಾದ, ಶ್ರೀ ದೇವಿಯ ಹೂವಿನ ಆಭಯ ಪ್ರಸಾದ, ಬಡವರಿಗೆ ವಸ್ತ್ರದಾನ, ಕಲ್ಯಾಣ ಮಂದಿರದ ಅನುಕೂಲ, ವಿದ್ಯಾರ್ಥಿಗಳಿಗಾಗಿ ವಿದ್ಯಾದಾನ ಹೀಗೆ ಹಲವು ರೀತಿಯ ದಾನ ಧರ್ಮಗಳನ್ನು ನಡೆಸುತ್ತಾ ಬಂದರು.


    ಶ್ರೀ ಗುರುವರ್ಯರ ದಿವ್ಯ ಉಪಸ್ಥಿತಿಯಲ್ಲಿ ದೇವಾಲಯದ ಪ್ರತಿಷ್ಠಾಪನೆಯು 15-03-1998 ರಿಂದ 21-03-1998 ರವರೆಗೆ ಒಂದು ವಾರಗಳ ಕಾಲ ಅಮೋಘವಾಗಿ ನಡೆಯಿತು. ವಿಜೃಂಭಣೆಯಿಂದ ಜರಗುತ್ತಿದ್ದ ಪ್ರತಿಷ್ಠಾ ಕಾರ್ಯಕ್ರಮದ ಸಮಯದಲ್ಲಿ ಸುಭಾಷ್‍ರವರು ಕಲ್ಯಾಣ ಮಂದಿರದ ಎದುರಿನ ನೇರಳೆ ಕಟ್ಟೆಯ ಮೇಲೆ ತಮ್ಮದೇ ಆದ ಬುದ್ಧನ ಭಂಗಿಯಲ್ಲಿ ಕುಳಿತು ಎಲ್ಲವನ್ನು ಶಿಶುವಿನ ದೃಷ್ಟಿಯಿಂದ ವೀಕ್ಷೀಸುತ್ತಿದ್ದುದನ್ನು ಕಂಡಾಗ ಇವರಲ್ಲೊಬ್ಬ ಬ್ರಹ್ಮಜ್ಞಾನಿ ಐಕ್ಯನಾಗಿದ್ದಾನೆಂದು ನೆನಪಿಸುತ್ತಿತ್ತು.


      ಈ ಎಲ್ಲಾ ಮಹತ್ಕಾರ್ಯಗಳನ್ನು ತಮ್ಮ ವಿನಯ ಸಂಪನ್ನತೆಯಿಂದ ಮಾಡಿ ಶಾಶ್ವತವಾದ ಶ್ರೀ ಚೌಡೇಶ್ವರಿ ಸಂಕೀರ್ಣವನ್ನು ಕಟ್ಟಿ ನಿಲ್ಲಿಸಿದ ಮಹಾ ಮಾನವ, ಯಾವುದೇ ಸಭೆ, ಸಮಾರಂಭಗಳಲ್ಲಿ ವೇದಿಕೆಯಲ್ಲಿದ್ದುದನ್ನು ಯಾರೂ ಕಂಡಿರಲಿಲ್ಲ. ಹೂಹಾರಗಳ ಭಾರಕ್ಕೆ ಸದಾ ದೂರವಾಗಿರುತ್ತಿದ್ದ ಇವರು ಹಿರಿಯರು, ಗುರುಗಳು ವಿಮರ್ಶಿಸುವ ಹಾಗೆ ಮುಮುಕ್ಷುನಾದವನಿಗೆ ಮಾತ್ರ ಸಾಧ್ಯ.

      ತಮ್ಮ ಪತ್ನಿ ಹಾಗೂ ಮೂರು ಮಕ್ಕಳೊಂದಿಗೆ ತುಂಬು ಜೀವನ ನಡೆಸಿ ಯಾವಾಗಲೂ ಯಾರನ್ನು ದ್ವೇಷಿಸದೆ ಎಲ್ಲರೊಂದಿಗೂ ಸದಾ ಸ್ನೇಹಮಯಿಯಾಗಿ, ಅಜಾತಶತ್ರುವಾಗಿದ್ದರೂ ಹಣ ಗಳಿಕೆಯೊಂದೇ ಜೀವನ ಅಲ್ಲ ಎಂಬ ಸತ್ಯ ಇವರ ಬದುಕಿನಿಂದ ಅರಿಯಬಹುದು. 

     2002ರ ಮೇ ತಿಂಗಳ 25ನೇ ತಾರೀಖು ಹೃದಯ ತೊಂದರೆಯ ರೂಪದಲ್ಲಿ ಕಾಡಿದ ವಿಧಿ ಇವರನ್ನು ಅಂದು ಇಹಲೋಕದ ವ್ಯಾಪಾರವನ್ನು ಮುಗಿಸಿ ಹೊರಡುವಂತೆ ಮಾಡಿದಾಗ, ಇಡೀ ಕಾರ್ಗಲ್ ಹಾಗೂ ಸುತ್ತಲಿನ ಜನ ದಿಗ್ಭ್ರಾಂತರಾಗಿ ಹೋದರು. ದಿವ್ಯಚೇತನ ನಷ್ಟವಾದ ಮೇಲೆ ಕಳೇಬರದ ಅಂತಿಮ ದರ್ಶನಕ್ಕಾಗಿ ಆಗಮಿಸಿದ ಅಭಿಮಾನಿಗಳು, ದುಃಖತಪ್ತ ನುಡಿಗಳು, ಪಾರ್ಥಿವ ಶರೀರವನ್ನು ಅಲಂಕರಿಸಿದ ರಾಶಿ ರಾಶಿ ಪುಷ್ಪಾಹಾರಗಳನ್ನು ನೋಡಿದಾಗ 'ಶರಣರ ಸತ್ವ ಕಾಣುವುದು ಮರಣದಲ್ಲಿ' ಎಂಬ ವಾಕ್ಯದ ಮೂರ್ತಿರೂಪಕ್ಕೆ ಸುಭಾಷರವರು ಉಪಮೇಯರಾಗುತ್ತಾರೆ.
 

strip-1.jpg

ಪರಿವಾರ ದೇವರು 

ದರ್ಶನ ಸೇವೆ

ವಿಶೇಷ ದಿನಗಳು

Social Links

Follow us on Facebook and YouTube to keep yourself updated.

  • Facebook
  • YouTube
  • Instagram
  • Whatsapp
bottom of page